ಐನಾರ್ಸನ್, ಇಂಡ್ರೀಡಿ: 1851-1939. ಐಸ್ಲೆಂಡಿನ ಸಂಸತ್ ಸದಸ್ಯ, ಬ್ಯಾಂಕೊಂದರ ಹಾಗೂ ಹಣಕಾಸು ಇಲಾಖೆಯ ನಿರ್ದೇಶಕ, ಅಲ್ಲದೆ ನಾಟಕಕಾರ, ಭಾಷಾಂತರಕಾರ. ಹೀಗೆ ಶೋಭಿಸಿದ ಈತನದು ಬಹುಮುಖ ಪ್ರತಿಭೆ. ಐಸ್ಲೆಂಡಿನ ರಾಷ್ಟ್ರೀಯ ರಂಗಭೂಮಿಯನ್ನು ಸ್ಥಾಪಿಸಿ, ನಡೆಸಿದ ಕೀರ್ತಿಯೂ ಈತನದೇ. ಷೇಕ್ಸ್‌ಪಿಯರ್, ಇಬ್ಸೆನ್, ಜಾರ್ನ್‌ಸನ್ ಇವರ ನಾಟಕಗಳನ್ನೂ ಈತ ಭಾಷಾಂತರಿಸಿದ್ದಾನೆ.

1872ರಲ್ಲಿ ನೀಯಾರ್ಸ್ನಾಟನ್ (ಹೊಸ ವರ್ಷದ ಹೊಸ್ತಿಲಲ್ಲಿ) ಎಂಬ ಮೊದಲ ಪ್ರೇಮನಾಟಕವನ್ನು ಬರೆದು ಖ್ಯಾತಿ ಗಳಿಸಿದ. ಭಾಂಡಿಸ್, ಇಬ್ಸೆನ್, ಜಾರ್ನ್‌ಸನ್ ಈತನ ಮೇಲೆ ಪ್ರಭಾವ ಬೀರಿದರು. ಸಾಮಾಜಿಕ ನಾಟಕ ಸ್ಕೈಪಿಡ್ ಸೆಕ್ಕೂರ್ನಲ್ಲಿ (1902) ನೈಜಚಿತ್ರಣವನ್ನು ತರಲು ಯತ್ನಿಸಿದ. ಆದರೂ ಸಾಹಸಪುರ್ಣ ಪ್ರವೃತ್ತಿಯ ಕಡೆಗೆ ತನಗಿರುವ ಒಲವನ್ನು ಬಿಡಲಾಗದೆ ಚಾರಿತ್ರಿಕ ನಾಟಕಗಳ ವಸ್ತುವಿಗಾಗಿ ಜಾನಪದ ಕಥೆಗಳು, ವಂಶಚರಿತ್ರೆಗಳನ್ನು ಶೋಧಿಸಿದ. ಡ್ಯಾನ್ಸಿನ್ ಇ ಹ್ರುನಿ (ಹ್ರುನಿ ಎಂಬಲ್ಲಿ ನೃತ್ಯ) ಎನ್ನುವ ಇವನ ಸರಳರಗಳೆಯ ನಾಟಕ ತುಂಬ ಯಶಸ್ವಿಯಾಯಿತು.             (ಟಿ.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ